ಮಾಯಾಚಾರ್ಯ, ಜಿ ಡಿ
	(1925-) ಯಾವಗುರುವಿನಿಂದ ಶಿಲ್ಪಶಾಸ್ತ್ರ ಕಲಿಯಲಿಲ್ಲ. ಯಾವ ಪುಸ್ತಕವನ್ನೂ ಓದಲಿಲ್ಲ. ಶಿಲ್ಪ ಕೌಶಲ ರಕ್ತಗತವಾಗಿತ್ತು, ಕರಗತವಾಗಿತ್ತು, ಸುಪ್ತವಾಗಿತ್ತು. ಸಂಸಾರ ನಿರ್ವಹಣೆಯ ಒತ್ತಡ, ಬದುಕಿನ ಸವಾಲನ್ನು ಎದುರಿಸುವ ಇಚ್ಛಾ ಶಕ್ತಿ ಸುಪ್ತಕಲೆಗೆ, ಚೇತನ ನೀಡಿತು. ಕಟ್ಟಿಗೆಯಲ್ಲಿ, ಕಲ್ಲಿನಲ್ಲಿ ಕಲೆ ಅರಳಿತು; ಬೆಳಗಿತು. ಆ ವ್ಯಕ್ತಿ ಗುಂಡಪ್ಪ, ದೇವೇಂದ್ರಪ್ಪ ಮಾಯಾಚಾರ್ಯ. ತಂದೆ ದೇವೇಂದ್ರಪ್ಪ, ತಾಯಿ ಲಕ್ಷಮ್ಮ ಕರ್ನಾಟಕದ ಬಾಗಲಕೋಟೆ ಸಮೀಪದ ಹೆರಕಲ್‍ನಲ್ಲಿ ಜನನ. (16ನೆ ಡಿಸೆಂಬರ್ 1925) ಒಂದೂವರೆ ವರ್ಷ ಕಳೆಯುವುದರಲ್ಲಿ ಪಿತೃವಿಯೋಗ. ಸೋದರಮಾವ ಸಕರಪ್ಪನ ಆಶ್ರಯ, ಮರದ ಕೆತ್ತನೆ, ಮರಮುಟ್ಟುಗಳ ತಯಾರಿಕೆಯಂತಹ ಕಸುಬುಗಳಿಂದಲೇ ಜೀವನಾಧಾರ. ಬಡತನದ ಕಹಿ ಉಂಡೇ ಬೆಳೆದರು, ಬದುಕನ್ನು ಸವಾಲಾಗಿ ಸ್ವೀಕರಿಸಿದರು. 

	ಗುಂಡಪ್ಪ ಮಾಯಾಚಾರ್ಯರ ಪೂರ್ವಿಕರು ಶಿಲ್ಪಿಗಳು. ತಾತ ಮತ್ತು ತಂದೆಯವರು ಆ ವೃತ್ತಿಯನ್ನು ಮುಂದುವರೆಸಲಿಲ್ಲ. ನಾಲ್ಕನೆ ತಲೆಮಾರಿನಲ್ಲಿ ಕಲೆ ಮತ್ತೆ ವಿಕಾಸಗೊಂಡಿತು. ಚಾಲುಕ್ಯ ಶಿಲ್ಪಕಲಾ ವೈಭವದಿಂದ ಸಮೃದ್ಧವಾದ ನಾಡಿನಲ್ಲಿ ಹುಟ್ಟಿದ ಜೀವ, ಪೂರ್ವ ಸಂಸ್ಕಾರದ ಫಲವಿರಬೇಕು. ಗುಂಡಪ್ಪ ಮಾಯಾಚಾರ್ ಅವರಿಗೆ ಕಲೆ ಸಂಗೀತದಲ್ಲಿ ಅಪಾರ ಒಲವು ಆಸಕ್ತಿ, ಕಂಡ ದೃಶ್ಯಗಳನ್ನೆಲ್ಲಾ ಮನದ ಭಿತ್ತಿಯಲ್ಲಿ ಮೂಡಿಸಿಕೊಂಡು ಬಿಡುವಿನಲ್ಲಿ ಯಥಾವತ್ತಾಗಿ ಚಿತ್ರಿಸುವಂತಹ ಪ್ರತಿಭೆಗೆ ಕುಟುಂಬ ನಿರ್ವಹಣೆಯ ಒತ್ತಡ. ಹುನಗುಂದದ ಮಾರುತಿ ದೇವರ ರಥ ನಿರ್ಮಾಣದ ಅವಕಾಶ ಪ್ರಾಪ್ತಿ. ಧೈರ್ಯ ಮಾಡಿ ಒಪ್ಪಿದರು. ಮಾವ ಸಕರಪ್ಪನವರ ಜೊತೆಗೂಡಿ ಹದಿನೈದು ಅಡಿ ಎತ್ತರದ ರಥ ನಿರ್ಮಾಣ ಮಾಡಿದರು (1954). ಮಾಯಾಚಾರ್ ಅವರಲ್ಲಿ ಸುಪ್ತವಾಗಿದ್ದ ಕಲಾಶಕ್ತಿಯ ಪ್ರಕಾಶಕ್ಕೆ ಬರಲು ಇದೊಂದು ಸದವಕಾಶ. ಅಷ್ಟರಲ್ಲಿ ಕಮತಗಿಯಲ್ಲಿ ಇನ್ನೊಂದು ರಥ ನಿರ್ಮಾಣಕ್ಕೆ ಕರೆ. ಕಮತಗಿ ಹುಚ್ಚೇಶ್ವರ ಮಠದ ಕಲ್ಲಿನ ದ್ವಾರ ನಿರ್ಮಾಣಕ್ಕೆ ಆಮಂತ್ರಣ.

	ಕಮತಗಿ ಹುಚ್ಚೇಶ್ವರ ಮಠದ ಮುಖ್ಯದ್ವಾರದ ಸೌಂದರ್ಯ ಜನರ ಗಮನ ಸೆಳೆದಾಗ ಮಾಯಾಚಾರ್ಯರಿಗೆ ಎಲ್ಲ ಕಡೆಯಿಂದ ಆಹ್ವಾನ. ಇದಕ್ಕೆ ಮುನ್ನ ಖಾದಿ ಮತ್ತು ಗ್ರಾಮೋದ್ಯೋಗ ಮಂಡಲದಲ್ಲಿ ಕೆಲಕಾಲ ಕೆಲಸ. ವಿಜಾಪುರ, ಅಹಮದಾಬಾದ್, ಸಬರಮತಿಗಳಲ್ಲಿ ದುಡಿದ ನಂತರ ಕೆಲಸಕ್ಕೆ ರಾಜೀನಾಮೆಯಿತ್ತು ಶಿಲ್ಪಗಳ ರಚನಾಕಾರ್ಯಕ್ಕೆ ಪೂರ್ಣಾವಧಿಯ ಗಮನ ನೀಡಿದರು. 

	ವಾಸ್ತುಶಿಲ್ಪ ಶಾಸ್ತ್ರದ ಬಗೆಗೆ ಯಾರಿಂದಲೂ ಕಲಿಯದ ಗುಂಡಪ್ಪನವರು ಕ್ಲಿಷ್ಟವಾದ ಈ ಶಿಲ್ಪೋದ್ಯಮದಲ್ಲಿ ಮಾಡಿರುವ ಸಾಧನೆ ಪ್ರಯೋಗಗಳ ಬಗೆಗೆ ಅಚ್ಚರಿಯಾಗುತ್ತದೆ. ತಮ್ಮದೇ ಆದ ವಿಶಿಷ್ಟ ರಚನಾತಂತ್ರದಲ್ಲಿ ಸುಂದರ ವಿಗ್ರಹಗಳನ್ನು ನಿರ್ಮಿಸುವಂಥ ಜಾಣ್ಮೆ ಕೆಲವರಿಗೆ ಕುತೂಹಲಪಡಿಸುತ್ತದೆ. ಇವರ ಕಾರ್ಯಕ್ಷೇತ್ರದ ಸುತ್ತು ಮುತ್ತುಲಿರುವ ಐಹೊಳೆ, ಬಾದಾಮಿ, ಪಟ್ಟದಕಲ್ಲುಗಳ ನೂರಾರು ಶಿಲ್ಪಗಳು ಗುಂಡಪ್ಪನವರ ಕಲ್ಪನಾ ಶಕ್ತಿಗೆ ಚಾಲನೆ ನೀಡಿವೆ; ಪ್ರಭಾವ ಬೀರಿವೆ. ಚಾಲುಕ್ಯ ಶಿಲ್ಪಗಳಲ್ಲಿಯ ಕೆಲವು ವಿಶೇಷತೆಗಳು ಗುಂಡಪ್ಪ ಶಿಲ್ಪಿಯ ಕಲಾಕೃತಿಗಳಲ್ಲಿಯೂ ಮೂಡಿಬಂದಿರುವುದರಿಂದ ಇವರ ಶಿಲ್ಪಗಳು ಹೆಚ್ಚು ಆಕರ್ಷಕವಾಗಿರುತ್ತವೆ. ಮಿಂಚಿನವೇಗದಲ್ಲಿ ಒರಟುಕಲ್ಲಿನಲ್ಲಿ ಮೇಣದಂತೆ ಪ್ರತಿಕೃತಿಯನ್ನು ಈ ಶಿಲ್ಪಿ ರೂಪಿಸುವ ದೃಶ್ಯವನ್ನು ಕಣ್ಣಾರೆ ಕಾಣುವುದೇ ಒಂದು ಸೊಗಸು.

	ಶಿಲ್ಪಿ ಗುಂಡಪ್ಪ ವಿರಚಿತ ಶಿಲ್ಪಗಳಲ್ಲಿ ಕಾಳಿಕಾ, ಶಾರದಾ, ಮಹಾಲಕ್ಷ್ಮೀ, ಮಾರುತಿ, ಈಶ್ವರ, ಅನ್ನಪೂರ್ಣೆ, ಬಗಳಾಂಬಿಕೆ, ಸಂತೋಷಿಮಾತಾ, ಗಣೇಶ, ಬ್ರಹ್ಮ, ವೀರಭದ್ರ, ಚಿದಂಬರ ಮೂರ್ತಿಗಳಲ್ಲಿ ವೈವಿಧ್ಯತೆ ಕಾಣಬಹುದು. ಇವುಗಳಲ್ಲಿ ಎಣಿಕೆಗೆ ಮೀರಿದಷ್ಟು ಶಿಲ್ಪಗಳು ನಿರ್ಮಾಣಗೊಂಡು ಅಲ್ಲಲ್ಲಿ ಪೂಜೆಗೊಳ್ಳುತ್ತಿವೆ.

	ಗುಂಡಪ್ಪನವರು ರಚಿಸಿರುವ ಮಹಾತ್ಮ ಗಾಂಧೀಜಿ, ನೆಹರೂ, ಅಂಬೇಡ್ಕರ್, ಶಿವಾಜಿ ಸಿದ್ಧಾರೂಢ ಸ್ವಾಮೀಜಿ ಬಸವೇಶ್ವರ ಮುಂತಾದವು ಅಪರೂಪದ ಸಹಜ ಶಿಲ್ಪಗಳಾಗಿ ಬಹಳಷ್ಟು ಜನರ ಮನ ಸೆಳೆದಿವೆ. 

	ಗುಂಡಪ್ಪ ಮಾಯಾಚಾರ್ಯರು, ತಮ್ಮ ಸೃಜನ ಶೀಲತೆಗೆ, ಶಾಸ್ತ್ರ ಶುದ್ಧಿಯ ಸಂಯೋಜನೆ ಮಾಡಲು ಮನಸ್ಸು ಮಾಡಿದರು. ಎರಡನೆಯ ಪುತ್ರ ಮಹಾಬಲೇಶ ಶಿಲ್ಪಿ ಸ್ಥಪತಿ ಪದವೀಧರ. ದೇವಾಲಯ ಗೋಪುರ ನಿರ್ಮಾಣದಲ್ಲಿ ಪರಿಣತ. ವೀರೇಶ, ವರ್ಣ ಚಿತ್ರಕಲಾ ಪರಿಣತ. ಮಕ್ಕಳಾದ ಚಂದ್ರಶೇಖರ, ಪ್ರಭಾಕರ, ಎಲ್ಲರೂ ವಿದ್ಯಾವಂತರು, ಶಿಲ್ಪ ಪರಿಣತರು. ಶಿಲ್ಪದಲ್ಲಿ ಆಸಕ್ತರಿಗೆ ಮಾರ್ಗದರ್ಶನ ನೀಡಲೆಂದು 1982ರಲ್ಲಿ ಮಾಯಾಚಾರ್ಯರು ಬಾಗಲಕೋಟೆಯಲ್ಲಿ ಭುವನ ಶಿಲ್ಪಕಲಾ ಶಾಲೆ ಆರಂಭಿಸಿದರು. ಮಕ್ಕಳು ಕೈಗೂಡಿಸಿದ ಮೇಲೆ 1999ರಲ್ಲಿ ಶ್ರೀ ಗುಂಗಾಧರ ಶಿಲ್ಪಕಲಾ ಕಾರ್ಯಗಾರ ಆರಂಭಿಸಿದರು. 60 ಲಕ್ಷ ರೂಪಾಯಿ ವೆಚ್ಚದಲ್ಲಿ  ಆಧುನಿಕ ಯಂತ್ರೋಪಕರಣಗಳಿಂದ ಸಜ್ಜಾದ ಕಾರ್ಯಗಾರದಲ್ಲಿ ಈಗ ಬೃಹತ್ ಗಾತ್ರದ ದೇವಾಲಯ ಶಿಲ್ಪಗಳ ನಿರ್ಮಾಣ ಸಾಧ್ಯವಾಗಿದೆ.

	ಮಾಯಾಚಾರ್ಯ ಶಿಲ್ಪಿಯವರಿಗೆ ರಾಜ್ಯ ಕರಕುಶಲ ಮಂಡಲಿ, ಲಲಿತಕಲಾ ಅಕಾಡೆಮಿಯ ಪ್ರಶಸ್ತಿಗಳಲ್ಲದೆ 1978ರಲ್ಲಿ ರಾಣಾ ಪ್ರತಾಪ ವಾಸ್ತುಶಿಲ್ಪಿ ಎಂಬ ಬಿರುದಿನ ಗೌರವವೂ ಸಂದಿದೆ. ಕರ್ನಾಟಕ ಸರ್ಕಾರವು ಶಿಲ್ಪಕಲೆಗಾಗಿ ನೀಡುವ ಜಕಣಾಚಾರಿ ಪ್ರಶಸ್ತಿಯನ್ನು 1997ರಲ್ಲಿ ಈ ಸಾಹಸಿಗೆ ನೀಡಿ ಪುರಸ್ಕರಿಸಿದೆ. 				

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ